ದೇವಪಾಲ -
ಬಂಗಾಲ ಬಿಹಾರಗಳನ್ನಾಳಿದ ಪಾಲವಂಶದ ಮೂರನೆಯ ದೊರೆ (810-850). ಧರ್ಮಪಾಲನ ಮಗ. ರಾಷ್ಟ್ರಕೂಟ ವಂಶದ ರನ್ನಾದೇವಿ ಇವನ ತಾಯಿ. ಧರ್ಮಪಾಲ ನಲವತ್ತು ವರ್ಷಗಳ ಕಾಲ ರಾಜ್ಯವಾಳಿ ತಂದೆಯಂತೆಯೇ ಸುವಿಖ್ಯಾತನಾದ. ಇವನ ಆಳ್ವಿಕೆಯಲ್ಲಿ ಪಾಳವಂಶದ ಕೀರ್ತಿ ಪ್ರತಿಷ್ಠೆಗಳು ಗರಿಷ್ಟ ಮಟ್ಟ ಮುಟ್ಟಿದವು. ಇಡೀ ಉತ್ತರ ಭಾರತದಲ್ಲಿ ಹಿಮಾಲಯದಿಂದ ವಿಂಧ್ಯ ಪರ್ವತದ ವರಗೆ, ಅಸ್ಸಾಮಿನಿಂದ ಕಾಶ್ಮೀರದ ವರಗೆ ಇವನ ಪ್ರಭುತ್ವ ವಿಸ್ತರಿಸಿತ್ತು. 

ಧರ್ಮಪಾಲನಂತೆ ದೇವಪಾಲನೂ ಬೌದ್ಧಮತದ ಪೋಷಕ. ಇವನು ಅಶೋಕ ಶ್ರೀಮಿತ್ರ ಎಂಬ ಬೌದ್ಧ ಸಂನ್ಯಾಸಿಯ ಶಿಷ್ಯನಾಗಿದ್ದ. ಭಾರತದ ಹೊರಗಡೆ ಅನೇಕ ಬೌದ್ಧ ದೇಶಗಳಲ್ಲಿ ಇವನ ಕೀರ್ತಿ ಹರಡಿತ್ತು. ಜಾವದ ಶೈಲೇಂದ್ರ ವಂಶದ ಬಲಪುತ್ರದೇವನ ನಿಯೋಗವೊಂದಕ್ಕೆ ಈತ ಸ್ವಾಗತ ನೀಡಿ, ಆ ದೊರೆಯ ಪೋಷಣೆಗೆ ಒಳಪಟ್ಟು ನಾಲಂದದಲ್ಲಿ ಬೌದ್ಧ ಆಶ್ರಮವೊಂದರ ನಿರ್ವಹಣೆಗಾಗಿ ಐದು ಗ್ರಾಮಗಳನ್ನು ದತ್ತಿ ಕೊಟ್ಟಿದ್ದ. ನಾಲಂದದಲ್ಲಿ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಇವನು ವಿಶೇಷ ಪ್ರೋತ್ಸಾಹ ನೀಡಿದ. ಮರಳಿನಲ್ಲಿ ಹೂತುಹೋಗಿದ್ದ ತ್ರೈಕೂಟಕ ದೇವಾಲಯವನ್ನು ದೇವಪಾಲ ಜೀರ್ಣೋದ್ಧಾರ ಮಾಡಿಸಿದ.
(ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ